ತಯಾರಿ..,
ಬಿ.ಎ.ಎಂ.ಎಸ್. ೨ನೇ ಹಂತದ ಎಲ್ಲಾ ವಿದ್ಯಾರ್ಥಿಗಳಿಗೆ ಇದು ಒಂದು ರೀತಿಯ ಕುತೂಹಲದ ಪ್ರವಾಸ. ಔಷಧ ಸಸಿಗಳನ್ನು ನೋಡುವ ನೆಪ ಹಿಡಿದು ೩ ದಿನಗಳ ಕಾಲ ಸುತ್ತಾಡುವ ಚಿಂತನೆಯಲ್ಲಿ ಇರುತ್ತಾರೆ. ನಮ್ಮ ಉದ್ದೇಶವು ಅದೇ ಇತ್ತು.
೨ ನೇ ಹಂತದ ತರಗತಿಗಳು ಪ್ರಾರಂಭವಾಗುತ್ತಿದ್ದಂತೆಯೇ , ಅದರ ಬಗ್ಗೆ ಕುತೂಹಲದಿಂದಿದ್ದೆವು. ಅತಿ ಆಸೆ ಗತಿಗೇಡು ಎಂಬಂತೆ , ತರಗತಿ ಶಿಕ್ಷಕರಿಗೆ ಎಷ್ಟೇ ವಿನಂತಿಸಿದರು ಅವರ ಮನಸ್ಸು ಒಗ್ಗಲಿಲ್ಲ. ಎಲ್ಲರೂ ಅದರ ಆಸೆ ಬಿಟ್ಟಿದ್ದರು.
ಹಠಾತ್ತಾಗಿ ಒಂದು ದಿನ ವಿದ್ಯಾರ್ಥಿಗಳಿಗೆ ಪ್ರವಾಸದ ತಯಾರಿ ನಡೆಸಲು ತಿಳಿಸಿದರು. ಆಸೆಯ ಮೊಳಕೆ ಚಿಗರೊಡೆದಂತೆ ಆಯಿತು . ೧ ವಾರದ ಸಮಯ ಮಾತ್ರ ಉಳಿದಿತ್ತು. ಆಹಾರ, ಹಣಕಾಸು ಮತ್ತು ವಾಹನದಂತೆ ಜವಾಬ್ದಾರಿಗಾಗಿ ಗುಂಪುಗಳಾಗಿ ವಿಂಗಡಿಸಿದೆವು. ಎಲ್ಲಾ ತಯಾರಿ ನಡೆಸಿ ೬ ಫೆಬ್ರವರಿ , ಸಂಜೆ ಪ್ರಯಾಣ ನಡೆಸಲು ಸಿದ್ಧರಾಗಿದ್ದೆವು.

ಅಧ್ಯಾಯ -೧ ……
ಮುಸ್ಸಂಜೆ ವೇಳೆ , ಸೂರ್ಯನ ಕಿರಣಗಳು ಅಂತ್ಯವಾಗುತಿದ್ದಂತೆಯೇ, ವಿದ್ಯಾರ್ಥಿಗಳ ಮುಖದಲ್ಲಿ ಮಂದಹಾಸ ಹೊಳೆಯಲು ಪ್ರಾರಂಭವಾಯಿತು. ಯಾವುದೇ ವಿಘ್ನ ನಡೆಯದಂತೆ , ವಾಹನಕ್ಕೆ ಪೂಜೆ ನಡೆಸಿ ಪ್ರಯಾಣ ನಡೆಸಿದೆವು.
ಡಿಜಿ’ಯಲ್ಲಿ ಡಿಜೆ ರಾತ್ರಿ
ವಾಹನ ಬಳ್ಳಾರಿ ನಗರದ ಗಡಿ ದಾಟುತ್ತಿದ್ದಂತೆ ಹಾಡುಗಳ ಸುರಿಮಳೆ ನಡೆಯಿತು , ಎಲ್ಲರ ದೇಹದಲ್ಲಿ ಮೈಕೆಲ್ ಜಾಕ್ಸನ್ ಪ್ರವೇಶಿಸಿದನು. ಹುಚ್ಚರಂತೆ ಕುಣಿಯಲು ಪ್ರಾರಂಭಿಸಿದರು , ಹುಡುಗರು ಹಾಗೂ ಹುಡುಗಿಯರ ನಡುವೆ ಪೈಪೋಟಿ ನಡೆಯಿತು , ಅದರಲ್ಲಿ ಪ್ರೇಕ್ಷಕರು ಬಹುಮಾನ ಪಡೆದರು .
ಒಂದು ಗುಟ್ಟು , ಒಂದು ಸುಳ್ಳು , ಒಂದು ನಿಜ .
ಆ ರಾತ್ರಿ ಮನಸ್ಸು ಮುಟ್ಟಿದ ಮೂರು ಘಟನೆಗಳು . ಅಂದು ಎಲ್ಲರೂ ಸಂತಸ , ಸಡಗರದಿಂದ ಕೂಗಾಡುತ್ತಾ ಕುಣಿಯುತ್ತಿದ್ದರು. ನಾನು ಕಿಟಕಿ ಪಕ್ಕ ಮೌನವಾಗಿ ಕೂತಿದ್ದೆನು. ಆ ಮೌನ ಮಾತಾದರೆ ೩ ಸನ್ನಿವೇಶಗಳು ಹೊರಬರುತ್ತವೆ.
ನೀನು ಎಂತಕ್ಕೆ ಸಂಭ್ರಮಿಸದೆ ಕುಳಿತಿರುವೆ ಎಂದು ಪ್ರಶ್ನಿಸಿದರು. ನನಗೆ ಅತಿಯಾದ ಸಂಭ್ರಮ , ಸಡಗರ ಅಂಗೀಕಾರವಾಗದು ಎಂಬ ಸುಳ್ಳು ಹೇಳಿದೆ. ಆದರೆ ಅದಕ್ಕೆ ಕಾರಣ ಮತ್ತೊಂದು ಇತ್ತು , ಅಂದಿಗೆ ನನ್ನ ಅಜ್ಜ ತೀರಿಕೊಂಡು ಒಂದು ವರ್ಷಗಳ ಕಾಲವಾಗಿತ್ತು ಅದು ಗುಟ್ಟಾಗಿ ಉಳಿದಿತ್ತು.
ಮತ್ತೆ ನಿಜದ ಬಗ್ಗೆ ಹೇಳಬೇಕೆಂದರೆ , ಬಹಳ ದಿನಗಳ ಕಾಲ ಹಿತಿ ಮಿತಿಗಳಿಂದ ಪಂಜರದಲ್ಲಿ ಇದ್ದಂತೆ ಇದ್ದ ವಿದ್ಯಾರ್ಥಿಗಳಿಗೆ ಸ್ವತಂತ್ರ ಸಿಕ್ಕರೆ ಎಂದೂ ಕಾಣದ ಸಡಗರ ತೋರಿಸುತ್ತಾರೆ. ಇದು ನಾನು ಅಂದು ಕಂಡ ಸನ್ನಿವೇಶ , ನನ್ನ ಅಭಿಪ್ರಾಯ ಮಾತ್ರ
ಮುಂದುವರೆಯುವುದು………………